ಗೌರಾಮಿ-
ಪರ್ಸಿಫಾರ್ಮಿಸ್ ಗಣದ ಆಸ್ಫ್ರೋನಿಮಿಡೆ ಕುಟುಂಬಕ್ಕೆ ಸೇರಿದ ಮೀನುಗಳಿಗೆ ಇರುವ ಸಾಮಾನ್ಯ ಹೆಸರು. ಶಾಸ್ತ್ರೀಯ ನಾಮ ಆಸ್ಫ್ರೋನಿಮಸ್ ಗೊರಾಮಿ, ಮೂಲತಃ ಇಂಡೋನೇಶಿಯ, ತೈಲಾಂಡ್, ಮಲೇಶಿಯಾ, ಕಾಂಬೋಡಿಯಾ, ವಿಯಟ್ನಾಂ ದೇಶಗಳ ಸಿಹಿನೀರು ಪ್ರದೇಶಗಳಲ್ಲಿ ವಾಸಿಸುವ ಮೀನು.  ಇದನ್ನು ಆ ದೇಶಗಳಲ್ಲಿಯಲ್ಲದೇ ಬೇರೆ ದೇಶಗಳಿಗೆ ಕೊಂಡಯ್ದು ಸಾಕಾಣಿಕೆ ಮಾಡಲಾಗುತ್ತಿದೆ. ಈಗ ಇದು ಭಾರತ, ಫಿಲಿಪ್ಪೀನ್ಸ್, ಶ್ರೀಲಂಕಾ, ಮಡಗಾಸ್ಕರ್ ಮೊದಲಾದ ದೇಶಗಳಲ್ಲಿ ಕಾಣಸಿಗುತ್ತದೆ. 1916 ರಲ್ಲಿ ಜಾವಾ ಮತ್ತು ಮಾರಿಷಸ್ ನಿಂದ ತಮಿಳುನಾಡಿಗೆ ತರಲಾದ ಗೌರಾಮಿಗಳನ್ನು ಸಾಕಿ ಭಾರತದಲ್ಲಿ ನೆಲೆಗೊಳ್ಳುವಂತೆ ಮಾಡಲಾಯಿತು. ಇದು ಉಷ್ಣವಲಯದ ಮೀನಾಗಿದ್ದು 150 ಸೆ. ಗಿಂತ ಕಡಿಮೆ ಉಷ್ಣತೆಯ ಶೀತಲ ನೀರಿನಲ್ಲಿ ಬದುಕಿರಲಾರದು. ಇದು ಸುಮಾರು 65 ಸೆ.ಮೀ. ವರೆಗೆ ಬೆಳಯಬಲ್ಲುದು. ಕಿವಿರು ಗೂಡಿನಲ್ಲಿ ಶ್ವಾಸನೇಮದ್ರಿಯಗಳಿರುವುದರಿಮದ ಇದು ನೇರವಾಗಿ ನೀರಿನ ಹೊರಗಿನ ಗಾಳಿಯನ್ನು ಉಸಿರಾಟಕ್ಕೆ ಬಳಸಿಕೊಳ್ಳಬಲ್ಲದು. ಗೌರಾಮಿ ಪ್ರಧಾನವಾಗಿ ಸಸ್ಯಾಹಾರಿ; ನೀರಿನಲ್ಲಿ ಬೆಳೆಯುವ ಮೃದು ಜಲಸಸ್ಯಗಳನ್ನು ತಿಂದು ಜೀವಿಸುತ್ತದೆ. ಇದಲ್ಲದೆ ಕೆಲವು ಬಾರಿ ಸಣ್ಣ ಹುಳ, ಸೀಗಡಿ, ಕೀಟದ ಮರಿಗಳು, ಇತ್ಯಾದಿಗಳನ್ನು ತಿನ್ನುತ್ತವೆ. ಮರಿ ಗೌರಾಮಿಗಳು ರೋಟಿಫರ್ ಮತ್ತು ಇನ್ಫುಸೋರಿಯನ್ ಜಾತಿಯ ಸೂಕ್ಷ್ಮ ಪ್ರಾಣಿ ಫ್ಲವಕಗಳನ್ನು ತಿನ್ನುತ್ತವೆ. ಈ ಮೀನು ಕೃತಕ ಆಹಾರವನ್ನು ತಿನ್ನುತ್ತವಾದ್ದರಿಂದ ಈ ಮೀನನ್ನು ಇಂಡೋನೇಶಿಯಾ, ಫಿಲಿಪೈನ್ಸ್ ಮೊದಲಾದ ದೇಶಗಳಲ್ಲಿ ಸಾಕಾಣಿಕೆ ಮಾಡಲಾಗುತ್ತಿದೆ. ಆದರೆ ಮಂದಗತಿಯ ಬೆಳವಣಿಗೆಯ ಕಾರಣ ಭಾರತದಲ್ಲಿ ಈ ಮೀನನ್ನು ಅಷ್ಟಾಗಿ ಸಾಕುವುದಿಲ್ಲ. 

ಅಂಡಾಕಾರದ ಮತ್ತು ಪಾಶ್ರ್ವದಿಂದ ಪಾಶ್ರ್ವಕ್ಕೆ ಚಪ್ಪಟೆಯಾದ ದೇಹ, ಭುಜದ ರೆಕ್ಕೆಯ ಬುಡದಲ್ಲಿರುವ ಇರುವ ಕಪ್ಪು ಚುಕ್ಕೆ, ಮರಿ ಮೀನುಗಳಲ್ಲಿರುವ ನಾಲ್ಕೈದು ಉದ್ದ ಪಟ್ಟೆಗಳು — ಈ ಮೀನಿನ ಪ್ರಧಾನ ಲಕ್ಷಣಗಳು. ಗೌರಾಮಿ ಮೀನು ವರ್ಷದಲ್ಲಿ ಅನೇಕ ಬಾರಿ ಸಂತಾನೋತ್ಪತ್ತಿ ಮಾಡುತ್ತದೆಯಾದರೂ ಸಾಮಾನ್ಯವಾಗಿ ಬೇಸಿಗೆಯಲ್ಲಿ ಅಂದರೆ, ಏಪ್ರಿಲ್-ಮೇ ತಿಂಗಳಲ್ಲಿ ಹೆಚ್ಚಾಗಿ ಸಂತಾನೋತ್ಪತ್ತಿ ಮಾಡುತ್ತದೆ. ಇದು ಸ್ವಾಭಾವಿಕಾಗಿ ಕೊಳಗಳಲ್ಲಿ, ತೊರಗಳಲ್ಲಿ ಸಂತಾನೋತ್ಪತ್ತಿ ಮಾಡಬಲ್ಲುದು. ಮೊಟ್ಟೆ ಹಾಕುವ ಸಮಯ ಬಂದಾಗ ಗಂಡು ಮತ್ತು ಹೆಣ್ಣು ಮೀನು ಸಾಮಾನ್ಯವಾಗಿ ಕೊಳದ ಗೋಡಗಳ ಸಮೀಪ ಗಿಡಗಳ ಪೊದೆಯ ಕೆಳಭಾಗದಲ್ಲಿ ಗೂಡು ನಿರ್ಮಿಸುತ್ತವೆ. ಸುಮಾರು 10 ದಿನಗಳವರೆಗೆ ಗೂಡು ನಿರ್ಮಿಸುತ್ತವೆ ಇದಕ್ಕೆ ಯಾವುದೇ ನಿರ್ದಿಷ್ಟ ಆಕಾರವಿರುವುದಿಲ್ಲ. ಮೊಟ್ಟೆಗಳು ಹಳದಿ ಮಿಶ್ರಿತವಾಗಿದ್ದು ಅರೆಪಾರದರ್ಶಕವಾಗಿರುತ್ತವೆ. 36 ಗಂಟೆಗಳಲ್ಲಿ ಹೊಡೆದು ಮರಿಗಳಾಗುತ್ತವೆ. ಈ ಸಮಯದಲ್ಲಿ ತಂದೆ ತಾಯಿ ಮೀನುಗಳು ಸುಮಾರು ನಾಲ್ಕುವಾರಗಳವರೆಗೆ ಗೂಡು ಮತ್ತು ಮರಿಗಳನ್ನು ಕಾಪಾಡುತ್ತ ಕಾವಲಿರುತ್ತವೆ.

ಅಕ್ವೇರಿಯಂಗಳಲ್ಲಿ ಈ ಮೀನುಗಳನ್ನು ಸಾಮಾನ್ಯವಾಗಿ ಸಾಕುತ್ತಾರೆ. ಬ್ಲೂ ಗೌರಾಮಿ, ಮೂರು ಚುಕ್ಕೆ ಗೌರಾಮಿ, ಕುಬ್ಜ ಗೌರಾಮಿ, ಹೊಂಬಣ್ಣದ ಗೌರಾಮಿ ಹೀಗೆ ಹಲವಾರು ಬಗೆಯ ತಳಿಗಳನ್ನು ಅಭಿವೃದ್ಧಿ ಪಡಿಸಿ ಮಾರಾಟ ಮಾಡಲಾಗುತ್ತಿದೆ.
			(ಬಿ.ಎನ್.; ಟಿ.ಎಸ್.ವಿಶ್ವನಾಥ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ